ಪತ್ರಕರ್ತ ಪ್ರಸನ್ನ ಕುಲಕರ್ಣಿ ಅವರ ಪರಿಸರ ಸ್ನೇಹಿ ಗಣೇಶೋತ್ಸವ


ಪತ್ರಕರ್ತ ಪ್ರಸನ್ನ ಕುಲಕರ್ಣಿ ಅವರ ಪರಿಸರ ಸ್ನೇಹಿ ಗಣೇಶೋತ್ಸವ

ಕಳೆದ 25 ವರ್ಷಗಳಿಂದ ಮಣ್ಣಿನಿಂದ ನಿರ್ಮಿಸಿದ ಗಣೇಶ ವಿಗ್ರಹ ಪ್ರತಿಷ್ಠಾಪನೆಯ ಪರಂಪರೆ ರಕ್ತದಾನ ಮತ್ತು ದೇಹದಾನದ ಮೂಲಕ ಇತರರಿಗೆ ಮಾದರಿ    

ಖಾನಾಪುರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ವಿಗ್ರಹಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಖಾನಾಪುರದ ಪತ್ರಕರ್ತ ಪ್ರಸನ್ನ ಕುಲಕರ್ಣಿ ಅವರ ಕುಟುಂಬ ಕಳೆದ 25 ವರ್ಷಗಳಿಂದ ನಿರಂತರವಾಗಿ ಮಣ್ಣಿನಿಂದ ನಿರ್ಮಿಸಿದ ಬಣ್ಣರಹಿತ ನೈಸರ್ಗಿಕ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಡುವ ಪತ್ರಿಕಾ ರಂಗದಲ್ಲಿರುವ ಪತ್ರಕರ್ತ ಪ್ರಸನ್ನ ಕುಲಕರ್ಣಿಯವರು ತಮ್ಮ ವೃತ್ತಿಯನ್ನು ಕೇವಲ ವರದಿಗಾರಿಕೆಗೆ ಸೀಮಿತಗೊಳ್ಳದೆ, ತಮ್ಮ ವಿಶೇಷ ಕಾರ್ಯದ ಮೂಲಕ ಪರಿಸರ ರಕ್ಷಣೆಯ ಕರ್ತವ್ಯವನ್ನು ಎತ್ತಿಹಿಡಿದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಪಿಒಪಿ ಗಣಪತಿಯ ಭರಾಟೆ, ಕೃತಕ ಬಣ್ಣಗಳ ಬಳಕೆ, ಶಬ್ದಮಾಲಿನ್ಯ ಮಾಡುವ ಪಟಾಕಿ,ಹೃದಯದ ಬಡಿತಕ್ಕೆ ಮಾರಕವಾಗಿರುವ ಡಿಜೆ, ಗಣನೀಯ ಪ್ರಮಾಣದಲ್ಲಿ ನಡೆಯುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಮಲೀನಗೊಳ್ಳುತ್ತಿದೆ. ಪರಿಸರ ಮಾಲಿನ್ಯದಿಂದ ನದಿ, ನಾಲೆ ಹಾಗೂ ನೈಸರ್ಗಿಕ ಜಲಮೂಲಗಳು ಹಾನಿಗೊಳಗಾಗುತ್ತಿವೆ. ಇದನ್ನು ತಡೆಯಲು ಈ ಪರಿಸರ ಸ್ನೇಹಿ ಗಣೇಶೋತ್ಸವದ ಆಚರಣೆ ಅತ್ಯಂತ ಸ್ಪೂರ್ತಿದಾಯಕ ಮತ್ತು ಅನುಕರಣೀಯವಾಗಿದೆ. ವಿಶೇಷವಾಗಿ ಪತ್ರಕರ್ತರು, ವೈದ್ಯರು, ನ್ಯಾಯವಾದಿಗಳು, ಉಪನ್ಯಾಸಕರು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಇಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಪರಿಸರ ನಾಶಕ್ಕೆ ಕಾರಣವಾಗುವ ಅಂಶಗಳ‌ ಅನುಸರಣೆಯನ್ನು ಕೈಬಿಡಬೇಕು. ಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಮುಂದಾಗುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

ಕೇವಲ ಪರಿಸರ ರಕ್ಷಣೆಯಲ್ಲಿ ಮಾತ್ರವಲ್ಲದೆ, ಸಮಾಜಮುಖಿ ಮತ್ತು ಧೈರ್ಯಶಾಲಿ ನಿರ್ಧಾರಗಳಲ್ಲೂ ಕುಲಕರ್ಣಿ ಕುಟುಂಬದ ಕಾರ್ಯ ಯಾವಾಗಲೂ ಮುಂದಿದೆ. ಈ ಹಿಂದೆ ಅವರ ತಂದೆಯ ನಿಧನದ ನಂತರ ಸಾಂಪ್ರದಾಯಿಕ ಅಂತ್ಯಸಂಸ್ಕಾರವನ್ನು ನೆರವೇರಿಸುವ ಬದಲು, ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡುವ ಮೂಲಕ ಈ ಕುಟುಂಬವು ಅತ್ಯಂತ ಶ್ಲಾಘನೀಯ ಮತ್ತು ವಿರಳವಾದ ನಿರ್ಧಾರವನ್ನು ತೆಗೆದುಕೊಂಡಿತ್ತು. ಸ್ವತಃ ಪತ್ರಕರ್ತ ಪ್ರಸನ್ನ ಕುಲಕರ್ಣಿ 96 ಬಾರಿ ತಮ್ಮ‌ರಕ್ತವನ್ನು ದಾನ ಮಾಡುವ ಮೂಲಕ ಖಾನಾಪುರ ತಾಲೂಕಿನಲ್ಲೇ‌ ಅತಿ ಹೆಚ್ಚು ರಕ್ತದಾನ ಮಾಡಿದ ಹಿರಿಮೆಗೆ ಭಾಜನರಾಗಿದ್ದಾರೆ. ಇಡೀ ಕುಟುಂಬ ದೇಹದಾನದ ವಾಗ್ದಾನ ಮಾಡಿದೆ. ಈ ಸಾಮಾಜಿಕ ಕಾರ್ಯದ‌ ಜೊತೆಗೆ ಪ್ರತಿ ವರ್ಷಕ್ಕೊಮ್ಮೆ ಆಚರಿಸುವ ಗಣೇಶ ಚತುರ್ಥಿಯಂದು

ಪ್ರಕೃತಿ ಸಂರಕ್ಷಣೆಗಾಗಿ ಮಣ್ಣಿನ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆಯನ್ನು ಉಳಿಸಿಕೊಂಡು ಹೊರಟಿದೆ. ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದು ಸಮಾಜಕ್ಕೆ ಉತ್ತಮ ಸಂದೇಶ ಹೇಳಹೊರಟಿದೆ. ಒಟ್ಟಾರೆ ಗಣೇಶ ಚತುರ್ಥಿಯನ್ನು ಆಢಂಬರಕ್ಕಾಗಿ, ಹಣವನ್ನು ನೀರಿನಂತೆ ವ್ಯಯಿಸುವುದಕ್ಕಾಗಿ, ತೋರಿಕೆಗಾಗಿ, ಸಾಮಾಜಿಕ‌ ಜಾಲತಾಣದಲ್ಲಿ‌ ಮಿಂಚುವುದಕ್ಕಾಗಿ ಅಥವಾ ಇತರರನ್ನು ಮೆಚ್ಚಿಸಲಿಕ್ಕಾಗಿ ಆಚರಿಸುವ ಜನರ ನಡುವೆ ಕುಲಕರ್ಣಿ ಕುಟುಂಬವು ತಮ್ಮ‌ ವಿಶೇಷ ಮತ್ತು ವೈಶಿಷ್ಟ್ಯ ಪೂರ್ಣ ಕೈಂಕರ್ಯದ‌ ಮೂಲಕ ಬಾಲ ಗಂಗಾಧರ ಟಿಳಕರು ಹಾಕಿಕೊಟ್ಟ ಸುಭದ್ರ ಹಿಂದು ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಆದರ್ಶಪ್ರಾಯ ದಾರಿಯಲ್ಲಿ ಹೊರಟಿದೆ.


112
कृपया वोट करा

ग्रामदूतच्या बातम्याबद्दल मत व्यक्त करा

error: Content is protected !!